ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ನೂರು ದಿನ ತುಂಬಿವೆ. ಇದನ್ನು ಸರಕಾರ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ವಿಜೃಂಭಣೆಯಿಂದಲೇ ಆಚರಿಸುತ್ತಿದೆ. ದಕ್ಷಿಣ ಭಾರತದಲ್ಲಿ ಆಡಳಿತಕ್ಕೇರಿದ ಮೊದಲ ಬಿಜೆಪಿ ಸರಕಾರ ಎಂಬುದೂ ಸೇರಿದಂತೆ ಈ ಆಚರಣೆಗೆ ಹಲವು ಕಾರಣಗಳನ್ನು ಆಡಳಿತಾರೂಢರು ಕಂಡುಕೊಂಡಿದ್ದಾರೆ. ಅವರ ದೃಷ್ಟಿಯಲ್ಲಿ ಇದು ಸರಿಯಾಗಿಯೂ ಇದೆ. ಇದೇ ವೇಳೆ ಸರಕಾರದ ನೂರು ದಿನಗಳ ಆಡಳಿತವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕೆಗೆ ಗುರಿಪಡಿಸುತ್ತಿವೆ. ವಿರೋಧ ಪಕ್ಷಗಳು ಇದನ್ನು ಮಾಡುವುದು ಸಹಜ. ಈ ಟೀಕೆಯಷ್ಟೇ ವಿರೋಧ ಪಕ್ಷಗಳ ಕೆಲಸವೇ? ಸರಕಾರ ಸರಿದಾರಿಯಲ್ಲಿ ಇಲ್ಲದಿದ್ದರೆ ಅದನ್ನು ಹಳಿಯ ಮೇಲೆ ತರುವಂಥ ಒಂದು ಸಂಸದೀಯ ಜವಾಬ್ದಾರಿಯೂ ವಿರೋಧ ಪಕ್ಷಕ್ಕಿಲ್ಲವೇ? ಈ ದೃಷ್ಟಿಯಲ್ಲಿ ಕಳೆದ ನೂರು ದಿನಗಳ ಅವಧಿಯಲ್ಲಿ ವಿರೋಧ ಪಕ್ಷಗಳ ಸಾಧನೆಯೇನು ಎಂಬ ಮೌಲ್ಯ ಮಾಪನದ ಅಗತ್ಯವೂ ಇದೆಯಲ್ಲವೇ?
ಕಳೆದ ನೂರು ದಿನಗಳಲ್ಲಿ ಮುಖ್ಯ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಏನು ಮಾಡಿತು? ಈ ಪ್ರಶ್ನೆಗೆ ಉತ್ತರ ಹುಡುಕಿದರೆ ನಮಗೆ ಸಿಗುವುದು ವಿ.ಎಸ್. ಉಗ್ರಪ್ಪನವರ ಉಗ್ರ ಹೇಳಿಕೆಗಳು, ಜನಾರ್ದನ ಪೂಜಾರಿಯವರ ನಾಟಕೀಯ ಮಾತುಗಳು, ಸರಕಾರವನ್ನು ಕುರಿತು ವ್ಯಂಗ್ಯವಾಡಿದ್ದಾರೆ ಎಂದು ನಾವೇ ಊಹಿಸಿಕೊಳ್ಳಬೇಕಾದ ಮಲ್ಲಿಕಾರ್ಜುನ ಖರ್ಗೆಯವರ ಅಭಿಪ್ರಾಯಗಳು. ಎಲ್ಲವಕ್ಕೂ ಪುಟವಿಟ್ಟಂತೆ ತೋರುವ ಸಿದ್ದರಾಮಯ್ಯನವರ ಅಭಾವ ವೈರಾಗ್ಯದ ಹೇಳಿಕೆಗಳು ಮಾತ್ರ. ಈ ಸಾಧನೆಗಳನ್ನು ಹೊರತು ಪಡಿಸಿದರೆ ಕಾಂಗ್ರೆಸ್ ಮತ್ತೊಂದು ಮುಖ್ಯ ಸಾಧನೆ ತನ್ನ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಮೂವರು ಶಾಸಕರನ್ನು ಕಳೆದುಕೊಂಡದ್ದು.
ಕಾಂಗ್ರೆಸ್ ತೊರೆದ ಈ ಮೂರೂ ಮಂದಿ ಶಾಸಕರು ತಮ್ಮ ನಿರ್ಧಾರಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. ಈ ಮೂವರೂ ರಾಜಕೀಯದಲ್ಲಿ ಅಷ್ಟೇನೂ ಅನುಭವವಿಲ್ಲದವರು. ಎಲ್ಲದಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ಇನ್ನೂ ಬಹಳ ಕಾಲ ಉಳಿಯುವ ಅಪೇಕ್ಷೆ ಇರುವವರು. ಕಾಂಗ್ರೆಸ್‌ನಂಥ ಶತಮಾನದ ಇತಿಹಾಸವಿರುವ ಪಕ್ಷವನ್ನು ತೊರೆಯುವ ಮುನ್ನ ತಮ್ಮ ಎಲ್ಲಾ ತಕ್ಷಣದ `ಸ್ವಾರ್ಥ'ಗಳ ಜತೆಗೆ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚಿಸಿರುವುದು ಖಚಿತ. ಅಷ್ಟಾಗಿಯೂ ಅವರು ಕಾಂಗ್ರೆಸ್ ತೊರೆಯಬೇಕೆಂದು ತೀರ್ಮಾನಿಸಿದ್ದರೆ ಅದರ ಹಿಂದೆ `ಸ್ವಾರ್ಥ'ವನ್ನು ಮೀರಿದ ತರ್ಕವೊಂದಿದೆ ಎಂಬುದಂತೂ ನಿಜ.
2008ರ ವಿಧಾನಸಭಾ ಚುನಾವಣೆಗಳು ಘೋಷಣೆಯಾದ ದಿನದಿಂದಲೂ ರಾಜ್ಯ ಕಾಂಗ್ರೆಸ್ ವರ್ತಿಸಿದ ರೀತಿಯೇ ಕಾಂಗ್ರೆಸ್ ವಿರೋಧ ಪಕ್ಷವಾಗಿಯೂ ಯಾಕೆ ಸೋಲುತ್ತಿದೆ ಎಂಬುದಕ್ಕೆ ಕಾರಣಗಳನ್ನು ನೀಡುತ್ತಿದೆ. ಕಾಂಗ್ರೆಸ್ ನಾಯಕರು ಚುನಾವಣೆಯನ್ನು ತಾವಾಗಿಯೇ ಗೆಲ್ಲುವ ಬಗ್ಗೆ ಯಾವತ್ತೂ ಯೋಚಿಸಲಿಲ್ಲ. ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ. ಕೃಷ್ಣರಂಥ ಅತಿರಥ ಮಹಾರಥರೆಲ್ಲರೂ ಯೋಚಿಸಿದ್ದು ಒಂದೇ ಹಾದಿಯಲ್ಲಿ. ಈ ಬಾರಿಯೂ ಸ್ಪಷ್ಟ ಬಹುಮತ ಯಾರಿಗೂ ದೊರೆಯುವುದಿಲ್ಲ. ದೇವೇಗೌಡರ ಜಾತ್ಯತೀತ ಜನತಾದಳ ಮತ್ತೆ ಮುಖ್ಯ ಪಾತ್ರವಹಿಸುತ್ತದೆ. ಅದರೊಂದಿಗೆ ಸೇರಿ ಸರಕಾರ ರಚಿಸಬಹುದು ಎಂಬುದು ಅವರೆಲ್ಲರ ಚಿಂತನೆಯ ಸಾರ.
ಕಾಂಗ್ರೆಸ್ ನಾಯಕರು ಹೀಗೆ ಯೋಚಿಸುವುದಕ್ಕೂ ಒಂದು ಕಾರಣವಿದೆ. ಪಕ್ಷ ಹಳೆಯದಾದಷ್ಟೂ ಹಿರಿಯ ನಾಯಕರ ಸಂಖ್ಯೆ ಹೆಚ್ಚಿದಷ್ಟೂ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತದೆ. ಕಾಂಗ್ರೆಸ್‌ನಲ್ಲಿಯೂ ಇಂಥವರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಇದಕ್ಕೆ ಪುಟವಿಟ್ಟಂತೆ ಸಿದ್ದರಾಮಯ್ಯನವರಂಥ `ಪ್ರಭಾವಿ' ಹಿಂದುಳಿದ ವರ್ಗಗಳ ನಾಯಕರೊಬ್ಬರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್‌ನ ಮೂಲ ನಿವಾಸಿ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಗಳೆಲ್ಲರ ಏಕೈಕ ಉದ್ದೇಶ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ದೂರವಿಡುವುದಾಗಿತ್ತು. ಇದೇ ಕಾರಣಕ್ಕಾಗಿಯೇ ಅವರೆಲ್ಲರೂ ಕಾಂಗ್ರೆಸ್ ಸ್ವಂತ ಸಾಮರ್ಥ್ಯದ ಮೇಲೆ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲಬಾರದೆಂದು ಒಳಗೊಳಗೇ ಆಸೆ ಪಟ್ಟರು. ಕಾಂಗ್ರೆಸ್- ಜೆಡಿಎಸ್ ಒಟ್ಟು ಸೇರಿ ಸರಕಾರ ರಚಿಸಬೇಕಾಗಿ ಬಂದರೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳಲು ದೇವೇಗೌಡರು ಸಿದ್ಧರಿರುವುದಿಲ್ಲ ಎಂಬುದು ಈ ಹಿರಿಯ ನಾಯಕರ ನಿರೀಕ್ಷೆಯಾಗಿತ್ತು.
ಚುನಾವಣೆಯಲ್ಲಿ ಸೋತ ನಂತರವಾದರೂ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಬುದ್ಧಿ ಬರುತ್ತದೆಯೆಂದು ಭಾವಿಸಿದವರಿಗೆ ಕಳೆದ ನೂರು ದಿನಗಳ ಅವಧಿ ನಿರಾಶೆಯುಂಟು ಮಾಡಿದೆ. ಚುನಾವಣಾ ಫಲಿತಾಂಶಗಳು ಹೊರಬಿದ್ದ ಮೇಲೆ ಸಿದ್ದರಾಮಯ್ಯನವರನ್ನು ವಿರೋಧ ಪಕ್ಷದ ನಾಯಕನಾಗದಂತೆ ತಡೆಯುವ ಪ್ರಯತ್ನ ಆರಂಭವಾಯಿತು. ಅದು ಯಶಸ್ವಿಯಾಗಿ ಮುಗಿದ ಮೇಲೆ ಸಿದ್ದರಾಮಯ್ಯ ಕೆಪಿಸಿಸಿ ಗಾದಿಗೆ ಬಾರದಂತೆ ತಡೆಯುವ ಪ್ರಯತ್ನ ಆರಂಭವಾಗಿ ಅದು ಈಗಲೂ ಮುಂದುವರಿಯುತ್ತಿದೆ. ನೂರು ದಿನಗಳ ಅವಧಿಯಲ್ಲಿ ಅನನುಭವಿ ಸರಕಾರವೊಂದನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿದ್ದ ಪ್ರಬಲ ವಿರೋಧ ಪಕ್ಷ ಕೇವಲ ತನ್ನೊಳಗಿನ ಜಗಳಗಳಿಂದಾಗಿ ವಿರೋಧ ಪಕ್ಷವೊಂದು ನಿರ್ವಹಿಸಬೇಕಾದ ಕನಿಷ್ಠ ಕೆಲಸಗಳನ್ನೂ ಮಾಡಲಿಲ್ಲ.
* * *
ಇಷ್ಟಕ್ಕೂ ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷರಾಗಿಬಿಟ್ಟರೆ ಕಾಂಗ್ರೆಸ್ ಚುರುಕಾಗಿ ಕೆಲಸ ಮಾಡಬಹುದೇ? ಕಾಂಗ್ರೆಸ್‌ನ ಇತಿಹಾಸ ನೋಡಿದರೆ ಈ ನಿಲುವನ್ನು ಸಮರ್ಥಿಸಬಹುದಾದ ಯಾವ ಉದಾಹರಣೆಯೂ ಸಿಗುವುದಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾದ ಇತ್ತೀಚಿನ ಉದಾಹರಣೆಯೆಂದರೆ ಎಸ್.ಎಂ. ಕೃಷ್ಣ ಅವರದ್ದು. ಎಸ್.ಎಂ. ಕೃಷ್ಣ ಈ ಹುದ್ದೆಗೆ ಬರುವಷ್ಟರಲ್ಲಿ ಕರ್ನಾಟಕದ ಜನತೆ ಆಡಳಿತಾರೂಢ ಜನತಾದಳದ ವಿದಳನ ಪ್ರಕ್ರಿಯೆಯಿಂದ ಬೇಸತ್ತಿದ್ದರು. ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ ತಮ್ಮ ಆಡಳಿತಾತ್ಮಕ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಬಗಲಲ್ಲಿಯೇ ಇದ್ದ ಸಿದ್ದರಾಮಯ್ಯನವರು ದೇವೇಗೌಡರ ಅಣತಿಯಂತೆ ನೀಡುತ್ತಿದ್ದ ಕಾಟವನ್ನು ಸಹಿಸಿಕೊಳ್ಳಬೇಕಾಗಿತ್ತು. ಇತ್ತ ರಾಮಕೃಷ್ಣ ಹೆಗಡೆಯವರು ಸೃಷ್ಟಿಸುತ್ತಿದ್ದ ಒತ್ತಡವನ್ನು ನಿರ್ವಹಿಸಬೇಕಾಗಿತ್ತು. ಈ ಮಧ್ಯೆ ಜೆ.ಎಚ್. ಪಟೇಲ್ ತಳೆದ ಕೆಲವು ಒಳ್ಳೆಯ ಆಡಳಿತಾತ್ಮಕ ನಿರ್ಧಾರಗಳು ಜನರಿಗೆ ತಿಳಿಯಲೇ ಇಲ್ಲ. ಜನರ ಮನಸ್ಸಿನಲ್ಲಿ ಇದ್ದದ್ದು ಕೇವಲ ಜನತಾದಳದ ಭಿನ್ನಮತ ಮಾತ್ರ.
ಇದಕ್ಕೆ ತಕ್ಕಂತೆ ಎಸ್.ಎಂ. ಕೃಷ್ಣ ಪಾಂಚಜನ್ಯ ಯಾತ್ರೆ ಹೊರಟರು. ಜನಬೆಂಬಲ ಅವರಿಗೆ ದೊರೆಯಿತು. ಈ ಹಿಂದೆ ವೀರೇಂದ್ರ ಪಾಟೀಲರು ಯಶಸ್ವಿಯಾದಾಗಲೂ ಇದೇ ಬಗೆಯ ಸ್ಥಿತಿ ಇತ್ತು. ಈಗ ಅಂಥದ್ದೊಂದು ಸ್ಥಿತಿಯಂತೂ ಇಲ್ಲ. ಬಿಜೆಪಿ ಇನ್ನು ಐದು ವರ್ಷಗಳ ಅವಧಿಯನ್ನು ಪೂರೈಸದೇ ಇರುವುದಕ್ಕೆ ಯಾವ ಕಾರಣವೂ ಇಲ್ಲ. ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅಧ್ಯಕ್ಷರಾದರೆ ಅವರಿಗೆ ಪಕ್ಷದೊಳಗಿನ ಭಿನ್ನಮತವನ್ನು ನಿರ್ವಹಿಸುವುದಕ್ಕಿಂತ ಹೆಚ್ಚಿನ ಕೆಲಸವೇನೂ ಇರಲಾರದು.
* * *
ಸಿದ್ದರಾಮಯ್ಯನವರ ಸಂಘಟನಾ ಕೌಶಲ್ಯವಂತೂ ಈಗಾಗಲೇ ಬಯಲಾಗಿದೆ. ಅಹಿಂದ ಸಂಘಟನೆಯ ಮೂಲಕ ಗಳಿಸಿದ ಜನಬೆಂಬಲವನ್ನು ಅವರೇ ಉಳಿಸಿಕೊಳ್ಳಲಿಲ್ಲ. ತಮ್ಮದೇ ಒಂದು ಪಕ್ಷವನ್ನು ಕಟ್ಟಿ ಅನನ್ಯತೆಯನ್ನು ಉಳಿಸಿಕೊಳ್ಳುವ ಎಲ್ಲಾ ಅವಕಾಶಗಳನ್ನೂ ಅವರೇ ಕಳೆದುಕೊಂಡರು. ಅವರನ್ನು ಕಾಂಗ್ರೆಸ್‌ಗೆ ಕರೆತರುವುದಕ್ಕೆ ಪ್ರಯತ್ನಿಸಿದ ನಾಯಕರೇ ಈಗ ಅವರ ವಿರೋಧಿಗಳಾಗಿರುವ ಈ ಸಂದರ್ಭದಲ್ಲಿ ಅವರು ಪಕ್ಷದ ನಾಯಕತ್ವವನ್ನು ಒಪ್ಪಿಕೊಂಡರೂ ಅದೊಂದು ಹುಲಿ ಸವಾರಿಯಾಗುವ ಸಾಧ್ಯತೆಯೇ ಹೆಚ್ಚು.
ಇಷ್ಟಕ್ಕೂ ಕಾಂಗ್ರೆಸ್‌ನೊಳಗಿನ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು ಸಿದ್ದರಾಮಯ್ಯನವರಿಗೆ ಈಗ ಉಂಟು ಮಾಡುತ್ತಿರುವ ಅಡ್ಡಿ ಕೇವಲ ಸಾಂಕೇತಿಕವಾಗಿರಲೂಬಹುದು. ಈಗಲೇ ಅವರನ್ನು ಅಧ್ಯಕ್ಷರನ್ನಾಗಿಸಿ ಸಂಘಟನೆಯ ವಿಷಯದಲ್ಲಿ ಸಿದ್ದರಾಮಯ್ಯ ಶೂನ್ಯ ಎಂದು ಸಾಬೀತು ಮಾಡಿದರೆ ಚುನಾವಣೆಯ ಹೊತ್ತಿಗೆ ಹೊಸ ಅಧ್ಯಕ್ಷರನ್ನು ಹೈಕಮಾಂಡ್ ನೇಮಿಸುತ್ತದೆ ಎಂಬ ದೂರದೃಷ್ಟಿಯೂ ಅವರಿಗಿರಬಹುದು.





Post new comment